ಚಿಕ್ಕಯ್ಯ

	ಸು. 1160, ವಚನಕಾರ, ನಿಜಲಿಂಗ ಚಿಕ್ಕಯ್ಯನೆಂದೇ ಪ್ರಸಿದ್ಧನಾಗಿದ್ದಾನೆ. ಬಸವೇಶ್ವರನ ಸಮಕಾಲೀನನೆಂದು ಕಾಣುತ್ತದೆ. ಈತನ ವಚನಗಳಿಂದ ಕವಿಚರಿತೆಕಾರರು ಒಂದು ವಾರ್ಧಕ ಷಟ್ಪದಿಯನ್ನು ಉದ್ಧರಿಸಿದ್ದಾರೆ. ಈತ ರಾಘವಾಂಕನಿಗಿಂತ ಹಿಂದೆಯೇ ಇದ್ದನೆಂದು ಊಹಿಸಬಹುದು. ಸಿದ್ಧನಂಜೇಶನ ಹೇಳಿಕೆಯಂತೆ ರಾಘವಾಂಕನೆ ಷಟ್ಪದಿ ರಚನೆಯ ಮೊದಲಿಗನೆಂಬ ಮಾತು ಆಗ ಸುಳ್ಳಾಗುತ್ತದೆ. ಸದ್ಯಕ್ಕೆ ಷಟ್ಪದಿ ರಚನೆ ರಾಘವಾಂಕನಿಗಿಂತ ಹಿಂದೆ ಇದ್ದರೂ ಷಟ್ಪದಿಯಲ್ಲಿ ಗ್ರಂಥ ರಚನೆಯಾದುದು ರಾಘವಾಂಕನಿಂದ ಎಂಬ ಮಾತನ್ನು ಒಪ್ಪಬಹುದಾಗಿದೆ. ಈತ ಉಳಿಯುಮೇಶ್ವರ ಎಂಬ ಅಂಕಿತದಲ್ಲಿ ವಚನಗಳನ್ನು ರಚಿಸಿದ್ದಾನೆ.

	ಈತನ ಕಥೆ ಹೀಗಿದೆ : ಕಾಶ್ಮೀರ ದೇಶದ ಮಾಂಡವ್ಯಪುರದ ತನ್ನ ಅರಮನೆಯಿಂದ ಮೂರುಸಾವಿರ ಚರಮೂರ್ತಿಗಳನ್ನು ಬಸವಣ್ಣ ಗುಪ್ತವಾಗಿ ಒಯ್ದನೆಂಬ ಕಾರಣದಿಂದ ಬಸವಣ್ಣನನ್ನು ರಹಸ್ಯವಾಗಿ ಕೊಂದುಬರುವಂತೆ ಇಬ್ಬರು ಭಟರನ್ನು ರಾಣಿ ಮಹಾದೇವಿ ಕಳುಹಿಸಿದಳು. ಕಪಟ ಜಂಗಮ ವೇಷದಿಂದಿದ್ದ ಆ ಭಟರು ಬಸವಣ್ಣನ ಕೃಪೆಗೆ ಪಾತ್ರರಾಗಿ ನಿಜಜಂಗಮರಾದರು. ಅವರಿಗೆ ಕ್ರಮವಾಗಿ ಚೋರಚಿಕ್ಕಯ್ಯ, ನಿಜಲಿಂಗ ಚಿಕ್ಕಯ್ಯ ಎಂದು ಹೆಸರಾಯಿತು. ನಿಜಲಿಂಗ ಚಿಕ್ಕಯ್ಯ ಓಲೆಗರಿಯನ್ನು ಮಾರುವ ಕಾಯಕ ನಡೆಸಿ ಗುರುಲಿಂಗಜಂಗಮ ಸೇವೆ ಮಾಡುತ್ತಿದ್ದ. ಒಮ್ಮೆ ಈತನನ್ನು ಗಂಗಯ್ಯನೆಂಬ ತಳವಾರ ಶಿವಪೂಜೆಗೆಂದು ಆಹ್ವಾನಿಸಿ, ರಾಜಕಾರ್ಯಕ್ಕಾಗಿ ಹೊರಗೆ ಹೋಗಿರಲು ಆತನ ಹೆಂಡತಿ ಚೆನ್ನಾಜಿ ಆ ಜಂಗಮನನ್ನು ಮೋಹಿಸಿ ರತಿಸುಖಕ್ಕೆ ಕರೆದಳು. ಆತನು ಒಪ್ಪದಿರಲು ಆತನ ಗಂಟಿನಲ್ಲಿ ತನ್ನ ಆಭರಣಗಳನ್ನಿಟ್ಟು ತನ್ನನ್ನು ಆತ ಕೆಡಸಬಂದನೆಂದೂ ಕಳ್ಳತನ ಮಾಡಿರುವನೆಂದೂ ಗಂಡನಿಗೆ ಚಾಡಿ ಹೇಳಿದಳು. ತನ್ನ ಮಾತನ್ನು ಗಂಡ ಒಪ್ಪದಿರಲು ದೂರನ್ನು ದೊರೆಯತನಕ ಒಯ್ದಳು. ಚಿಕ್ಕಯ್ಯನ ಗಂಟಿನಲ್ಲಿ ಆಕೆಯ ಆಭರಣಗಳಿದ್ದುದನ್ನು ಕಂಡ ದೊರೆ ಆತನ ತಲೆ ಕತ್ತರಿಸಲು ಆಜ್ಞಾಪಿಸಿದ. ಆದರೆ ಕತ್ತರಿಸಿದ ಚಿಕ್ಕಯ್ಯನ ತಲೆ ಆಕಾಶಕ್ಕೆ ನೆಗೆದು ಪಂಚಾಕ್ಷರಿಯನ್ನು ಜಪಿಸುತ್ತಿರಲು ಬಸವಣ್ಣ ಬಂದು ಆತನನ್ನು ಮತ್ತೆ ಬದುಕಿಸಿದ ಎಂಬುದಾಗಿ ಶಿವಶರಣರ ಪುರಾಣಗಳಿಂದ ತಿಳಿದುಬರುತ್ತದೆ.

   		ವಾರ್ಧಕ ಷಟ್ಟದಿಯಲ್ಲಿರುವ ಈತನ ಒಂದು ಪದ್ಯ:
ಭವಪಾಶಬಂಧದಿಂ ಬಿಗಿದು ಕವಿಲೆಯ ಹುಲಿಯ
		ಗವಿಯೊಳಗೆ ಕಟ್ಟಿದಂತಾದೆ ಸಂಸಾರವೆಂ
		ಬವಿಚಾರಸರ್ಪ ಸರ್ವಗ್ರಾಸಗೊಂಡುದಿದನೊಮ್ಮೆ ಪರಿಹರಿಸಿ ನಿಮ್ಮ
ಅವಿರಳ ಶ್ರೀಪಾದದೊಳು ಮಗ್ನನಾಗಿ ಮ
		ತ್ತವಿಕಲ್ಪ ಸಮಸುಖಾನಂದದೊಳಗೆಂದಿಹೆನೊ
ಭವರಹಿತ ಪರಮೇಶ ಪಾಲಿಸೈ ಸದ್ಗುರುವೆ ಉಳಿಯುಮೇಶ್ವರಲಿಂಗವೇ

	ಕವಿಚರಿತೆಕಾರರು ಈತನ ಮೂರು ವಚನಗಳು ಉಪಲಬ್ದವೆಂದೂ ಫ.ಗು. ಹಳಕಟ್ಟಿಯವರು 15 ವಚನಗಳು ಉಪಲಬ್ಧವೆಂದೂ ಹೇಳುತ್ತಾರೆ.									*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ